
ಸಿಗರೇಟು ಬೀಡಿ ಸೇದುವುದನ್ನು ಬಿಡಿ ಎಂದು ಚಟ ಅಂಟಿಸಿಕೊಂಡವರಿಗೆ ತಿಳಿಯಹೇಳುವುದು ಕಷ್ಟಸಾಧ್ಯ. ಬುದ್ದಿ ಹೇಳಿದರೆ ಕೆಲವೊಮ್ಮೆ ಮಹಾಪರಾಧವೇ ಆಗುತ್ತದೆ!ಯಾಕೆಂದರೆ, ತಂಬಾಕು ಬುದ್ದಿ ಹೇಳುವವರಿಗಿಂತ ಹೆಚ್ಚು ಬುದ್ದಿವಂತ. ಧೂಮಪಾನದ ಚಟ ದೆವ್ವ ಹಿಡಿದಹಾಗೆ. ಮಾವು ಬೇವು ನಿಂಬೆ ಸೊಪ್ಪಿಗೆ ಅದು ಬೆದರುವುದಿಲ್ಲ. ತಾನೇ ತಾನಾಗಿ ಕಾಲಿಗೆ ಬುದ್ದಿಹೇಳಿ ಹೋಗುವವವರೆಗೂ ಚಟ ಬೆಳೆಸಿಕೊಂಡವರ ಬೆನ್ನು ಹತ್ತಿದ ಬೇತಾಳನಾಗಿ ಕಾಟಕೊಡುವುದು ಶತಸ್ಸಿದ್ಧ. ಆದರೂ ಸಹ ಧೂಮಪಾನ ಚಟವನ್ನು ಹೋಗಲಾಡಿಸಲು ಮಾರ್ಗೋಪಾಯಗಳು ಹಲವಾರಿವೆ. ಮೊದಲನೆಯದು ಆತ್ಮ ಬಲ ಅಂದರೆ ವಿಲ್ ಪವರ್, ಎರಡನೆಯದು ಔಷಧ. ಆಲೋಪತಿ, ಆಯುರ್ವೇದ, ಹೋಮಿಯೋಪತಿ ಮುಂತಾದ ಎಲ್ಲ ವೈದ್ಯಕೀಯ ಪದ್ದತಿಗಳಲ್ಲೂ ಧೂಮಪಾನ ತ್ಯಜಿಸುವುದಕ್ಕೆ ಔಷಧಗಳಿವೆ. ಔಷಧವನ್ನು ಸೇವಿಸಲು ಮನಸ್ಸಿರಬೇಕು, ಅದೇ ಮೊದಲ ಮದ್ದು. ಇವತ್ತು ಅಂದರೆ ಜುಲೈ 13ರ ಸೋಮವಾರ ಬೆಳಗ್ಗೆ 10 ಗಂಟೆಗೆ ಜೀ ಕನ್ನಡ ಚಾನೆಲ್ಲಿನಲ್ಲಿ ಒಂದು ಆರೋಗ್ಯ ಅಂಕಣ ಪ್ರಸಾರವಾಯಿತು. ಕಾರ್ಯಕ್ರಮದ ಇವತ್ತಿನ ವಿಶೇಷ - ಧೂಮಪಾನ ಚಟ ನಿವಾರಣೆಗೆ ಮನೆ ಮದ್ದು. ಡಾ. ಆದರ್ಶ ಎಂಬುವವರು ಅವರು ಹೇಳಿದ ಔಷಧ ರೆಸಿಪಿ ವಿವರಗಳನ್ನು ನಾನು ಬರೆದುಕೊಂಡೆ. ಅದು ಹೀಗಿವೆ. ಧೂಮಪಾನ ಮಾಡುವವರು ಸ್ವತಃ ಪ್ರಯೋಗ ಮಾಡಬಹುದು. ಅಥವಾ,
ಅವರ ಪರವಾಗಿ ರೋಗಿಗೆ ಅತ್ಯಂತ ಬೇಕಾದವರು ಅಂದರೆ, ಹೆಂಡತಿ, ಅಕ್ಕ, ತಂಗಿ, ಸ್ನೇಹಿತರು ಯಾರಾದರೂ ತಯಾರಿಸಬಹುದು.
ಬೇಕಾಗುವ ಪದಾರ್ಥ :
2-3 ಹಿಪ್ಪಲಿ ತುಂಡುಗಳು1/4 ಚಮಚ ಗಸಗಸೆ
1/4 ಕಲ್ಲು ಸಕ್ಕರೆ
1/2 ಚಮಚ ಟೀಪುಡಿ
ಮಾಡುವ ವಿಧಾನ: ಒಲೆಯ ಮೇಲಿನ ಪಾತ್ರೆಯಲ್ಲಿ ಗಸಗಸೆ ಮತ್ತು ಹಿಪ್ಪಲಿಯನ್ನು ಬಾಕಿ ಸ್ವಲ್ಪ ಬೆಚ್ಚಗೆ ಮಾಡಬೇಕು. ಆನಂತರ ಒಂದು ಲೋಟ ನೀರು ಹಾಕಿ ಕುದಿಸಬೇಕು. ಕುದಿಯುವ ನೀರಿಗೆ ಕಲ್ಲುಸಕ್ಕರೆ ಮತ್ತು ಟೀ ಪುಡಿ ಹಾಕಿ ಮತ್ತಷ್ಟು ಕುದಿಸಬೇಕು. ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಿರಬೇಕು. ಈ ಕಷಾಯವನ್ನು ಸೋಸಿ ಆನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಿಂಡಬೇಕು. ಈ ಕಷಾಯವನ್ನು ಬೆಳಗ್ಗೆ ಮಾಡಿ ಕುಡಿದ ಪಕ್ಷದಲ್ಲಿ ಸಿಗರೇಟು ಬೀಡಿ ಸೇದುವುದಕ್ಕೆ ಸಾಧ್ಯವೇ ಇಲ್ಲ. ತಂಬಾಕಿನ ವಾಸನೆ ಬಂದಾಕ್ಷಣ ವಾಕರಿಕೆ ಬಂದು ಸಿಗರೇಟು ಸೇದುವ ಆಸೆ ಕಮರಿಹೋಗುತ್ತದೆ. ಎಷ್ಟೋ ಮಂದಿ ಧೂಮಪಾನ ಚಟಕ್ಕೆ ಬಲಿಯಾಗಿ ಸೇದಲಾರದೆ ಬಿಡಲಾರದೆ ನರಳುತ್ತಿರುತ್ತಾರೆ. ಅಂಥವರು ಗಟ್ಟಿ ಮನಸ್ಸು ಮಾಡಿ ಈ ಔಷಧ ಮಾಡಿ ಕುಡಿದು ಧೂಮಪಾನ ಚಟಕ್ಕೆ ಗುಡ್ ಬೈ ಹೇಳಬಹುದು. ಶ್ವಾಸಕೋಸದ ಅರ್ಬುದ ರೋಗ ಹತ್ತಿರ ಸುಳಿಯದಂತೆ ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬಹುದು
.