ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಲಭ್ಯವಿರುವ ತರಕಾರಿ, ಹಣ್ಣುಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಸೈಡ್ ಎಫೆಕ್ಟ್ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು.
ದಿನ ನಿತ್ಯ ಬಳಸುವ ತರಕಾರಿ ಹಾಗೂ ಹಣ್ಣುಗಳಾದ ಸೌತೆಕಾಯಿ, ಸೇಬು ಹಣ್ಣು, ಎಲೆಕೋಸು, ಕಿತ್ತಲೆ, ತೆಂಗಿನಕಾಯಿ, ಟೊಮಾಟೋ, ಕಲ್ಲಂಗಡಿ ಹಣ್ಣು, ಕ್ಯಾರೆಟ್, ಆಲೂಗೆಡ್ಡೆ, ದ್ರಾಕ್ಷಿ, ಪಪ್ಪಾಯ ಮುಂತಾದವುಗಳು ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆಯ ಸಾಧನಗಳಾಗಿ ಪರಿವರ್ತನೆಗೊಳಿಸಿ ಬಳಸಬಹುದು.
ಸೌತೆಕಾಯಿ ರಸ: ಚಿಕ್ಕ ಎಳೆ ಸೌತೆಕಾಯಿ ತೆಗೆದುಕೊಂಡು ಸಿಪ್ಪೆ ತೆಗೆದು, ಚೆನ್ನಾಗಿ ಹಿಚುಕಿ ರಸ ತೆಗೆಯಿರಿ. 1/4 ಭಾಗ ರೋಸ್ ವಾಟರ್ ಹಾಗೂ ನಿಂಬೆ ರಸ ಬೆರೆಸಿ. ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಿ. ಇದರಿಂದ ಮಂಕಾದ, ಜಿಡ್ಡು ಜಿಡ್ಡಾದ ಮುಖವು ಹೊಸ ಕಾಂತಿ ಪಡೆಯುತ್ತದೆ.
ಫೇಸ್ ಪ್ಯಾಕ್ ಶುದ್ಧೀಕರಣ: 1/4 ಟೀ ಚಮಚ ನಿಂಬೆ ರಸವನ್ನು 1 ಟೀ ಚಮಚ ಹಾಲು ಹಾಗೂ ಸೌತೆ ರಸದೊಂದಿಗೆ ಸಮವಾಗಿ ಬೆರೆಸಿ ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳಿ. ಸುಮಾರು 14 ನಿಮಿಷದ ನಂತರ ಮುಖ ಮಾರ್ಜನ ಮಾಡಬಹುದು.
ಎಲೆಕೋಸು ಮಾಸ್ಕ್: ಎಲೆಕೋಸಿನ ಕೆಲವು ಎಲೆಗಳನ್ನು ಅರೆದು ರಸ ತೆಗೆದುಕೊಳ್ಳಿ. ಅದಕ್ಕೆ 1/4 ಚಮಚ ಈಸ್ಟ್ ಬೆರೆಸಿ, 1 ಟೀ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿರಿ. ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಲೇಪಿಸಿರಿ. 15 ನಿಮಿಷದ ನಂತರ ನೀರಿನಲ್ಲಿ ಹತ್ತಿಯನ್ನು ಅದ್ದಿಕೊಂಡು ಮಾಸ್ಕ್ ಅನ್ನು ನಿಧಾನವಾಗಿ ಒರೆಸಿಕೊಳ್ಳಿ. ಈ ಕ್ರಮದಿಂದ ಮುಖದ ಸುಕ್ಕು, ಒಣ ತ್ವಚೆ ದೂರವಾಗಿ ಹೂವಿನಂತೆ ಅರಳುವುದು.
ಕಿತ್ತಲೆ ರಸ ಪ್ರಯೋಗ: ಕೆಲ ಬಾದಾಮಿಗಳನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಅದಕ್ಕೆ 2 ಟೀ ಚಮಚ ಹಾಲು ಮತ್ತು 1 ಟೀ ಚಮಚ ಕ್ಯಾರೆಟ್ ಹಾಗೂ ಕಿತ್ತಲೆ ರಸ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ನಂತರ ಮುಖಕ್ಕೆ ಲೇಪಿಸಿಕೊಂಡು ಸುಮಾರು ಅರ್ಧ ಗಂಟೆ ಕಾಲ ವಿಶ್ರಮಿಸಿ. ಇದರಿಂದ ಮುಖದಲ್ಲಿರುವ ಕಲೆಗಳು ದೂರವಾಗಿ, ತ್ವಚೆ ಮೃದುವಾಗಿ ಗೋಚರಿಸುತ್ತದೆ.
ಟೊಮಾಟೋ ಲೋಷನ್: 1 ಟೀ ಚಮಚ ಟೊಮಾಟೋ ರಸಕ್ಕೆ ಕೆಲ ಹನಿ ನಿಂಬೆ ರಸ ಬೆರೆಸಿ, 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿ ಉಂಟಾದ ಸೂಕ್ಷ್ಮರಂಧ್ರಗಳು ಕೂಡಾ ಮುಚ್ಚಲ್ಪಡುತ್ತವೆ. ಮೃದುವಾದ ಆಲೂಗೆಡ್ಡೆ ತುಂಡುಗಳನ್ನು ಹೆಚ್ಚಿಕೊಂಡಿ ನೇರವಾಗಿ ಮುಖಕ್ಕೆ ಬಳಿದುಕೊಳ್ಳಬಹುದು. ಅಥವಾ ಆಲೂಗೆಡ್ಡೆ ರಸವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ದಿನವಿಡೀ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಬಹುದು.
ಕಲ್ಲಂಗಡಿ ಹಣ್ಣು : ಸಣ್ಣ ಕಲ್ಲಂಗಡಿ ಹಣ್ಣು ತೆಗೆದುಕೊಂಡು, ಬೀಜಗಳನ್ನು ಎಸೆದು ರಸ ತೆಗೆದುಕೊಳ್ಳಿ. ಕುತ್ತಿಗೆ ಹಾಗೂ ಮುಖದ ಚರ್ಮಕ್ಕೆ 15 ನಿಮಿಷ ಲೇಪಿಸಿ, ನಂತರ ಮುಖ ತೊಳೆದುಕೊಳ್ಳಿ. ಈ ಲೋಷನ್ ನಿಂದ ಮುಖದ ಕಾಂತಿ ಹೆಚ್ಚುತ್ತದೆ.
ಕ್ಯಾರೆಟ್ ಲೋಷನ್ : 1/4 ಟೀ ಚಮಚ ಕ್ಯಾರೆಟ್ ರಸಕ್ಕೆ 1 ಟೀ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಸೋಡಾ ಬೈಕಾರ್ಬೊನೇಟ್ ಬೆರೆಸಿದ ನೀರಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿಕೊಳ್ಳಿ. ಇದರಿಂದ ತ್ವಚೆ ಮೃದುವಾಗಿ ನಳನಳಿಸುತ್ತದೆ.
ಟೊಮಾಟೋ ರಸ : 2 ಟೀ ಚಮಚ ಟೊಮಾಟೊ ರಸಕ್ಕೆ 4 ಟೇಬಲ್ ಚಮಚ ಮಜ್ಜಿಗೆ ಬೆರೆಸಿ ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ಕಾಲ ವಿರಾಮಿಸಿ. ಇದು ಸನ್ ಬರ್ನ್ ನಿಂದ ಉಂಟಾಗುವ ಕಿರಿಕಿರಿಯನು ತಪ್ಪಿಸುತ್ತದೆ.
ಸೇಬು ಹಣ್ಣು ಟಾನಿಕ್: 1 ಟೇಬಲ್ ಚಮಚ ಸೇಬು ಹಣ್ಣಿನ ರಸಕ್ಕೆ 1/4 ಟೀ ಚಮಚ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡು ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮುಖ ಹೊಳೆಯುತ್ತದೆ.
ಇದೇ ಕ್ರಮದಲ್ಲಿ ದ್ರಾಕ್ಷಿ ರಸವನ್ನು 15 ನಿಮಿಷಗಳ ಕಾಲ ಹಚ್ಚಿಕೊಳ್ಳುವುದರಿಂದ ತ್ವಚೆ ಮೃದುವಾಗುತ್ತದೆ. 1 ಟೇಬಲ್ ಚಮಚ ಪಪ್ಪಾಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ದೂರಾಗುತ್ತವೆ. ತೆಂಗಿನ ಕಾಯಿ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇನ್ನೂ ಅನೇಕ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.