Tuesday, March 8, 2011

ಸ್ತನ ಕ್ಯಾನ್ಸರ್ ಬಗ್ಗೆ ಸ್ತೀಯರಿಗೆ ಕಿವಿಮಾತು
ಸ್ತನ ಕ್ಯಾನ್ಸರ್ ! ಪ್ರತಿಯೊಬ್ಬ ಮಹಿಳೆಯನ್ನೂ ಬೆಚ್ಚಿ ಬೀಳಿಸುವ ಶಬ್ದ. ವಯಸ್ಸೋ, ವಂಶವಾಹಿನಿಯೋ, ಹಾರ್ಮೋನ್ ಬದಲಾವಣೆಗಳೋ, ಯಾವುದೋ ಒಂದು ಕಾರಣದಿಂದ ಎದೆಗಪ್ಪಳಿಸುವ ಈ ಕಾಯಿಲೆ ಬಗ್ಗೆ ಅನೇಕರಿಗೆ ಭಯ ಹೆಚ್ಚು ಆದರೆ, ತಿಳವಳಿಕೆ ಕಡಿಮೆ. ಸ್ತನಗಳ ಆರೋಗ್ಯ, ಮುಖ್ಯವಾಗಿ ಇಡೀ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಎಷ್ಟು ಮುನ್ನೆಚ್ಚರಿಕೆವಹಿಸಿದರೂ ಕಡಿಮೆಯೇ. ಪ್ರತಿಯೊಬ್ಬ ಮಹಿಳೆಯೂ ಈ ಕಾಯಿಲೆ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಕ್ಯಾನ್ಸರ್ ಹತ್ತಿರ ಸುಳಿಯದಂತೆ ಕಾಳಜಿವಹಿಸಬೇಕೆನ್ನುವ ಕಳಕಳಿ ದಟ್ಸ್ ಕನ್ನಡದ್ದು.

ಈ ಕ್ಯಾನ್ಸರಿನ ಬಹುತೇಕ ಪ್ರಕರಣಗಳಲ್ಲಿ ಮುನ್ನೆಚ್ಚರಿಕೆಗಿಂತ ಕಾಯಿಲೆ ಉಲ್ಬಣವಾದ ನಂತರವಷ್ಟೇ ಮಹಿಳೆಯರು ಚಿಕಿತ್ಸೆಯನ್ನು ಅರಸಿಕೊಂಡು ಹೋಗುವುದು ವ್ಯಕ್ತವಾಗಿರುವ ಅಂಶ. ಕಾಯಿಲೆ ಬಗ್ಗೆ ಬಹಳಷ್ಟು ಜನರಿಗೆ ಅರಿವು , ಮಾಹಿತಿ ಇಲ್ಲದಿರುವುದೇ ಉಲ್ಬಣಗೊಳ್ಳುವುದಕ್ಕೆ ಕಾರಣ. ಇಂಥ ಮಾನಿನಿಯರಿಗೆ ಮಾಹಿತಿ ಒದಗಿಸುವ ಮತ್ತು ತನ್ಮೂಲಕ ಜಾಗೃತಿ ಉಂಟುಮಾಡುವದಕ್ಕಾಗಿ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಎಂದು ಕರೆಯಲಾಗುತ್ತದೆ. ಇವತ್ತಿನಿಂದಲೇ ಆರಂಭಗೊಳ್ಳುವ ಜಾಗೃತಿ ಸದಾ ನಿಮ್ಮ ಸಂಗಾತಿಯಾಗಿರಲಿ ಎಂಬ ಆಶಯ ನಮ್ಮದು.
ಮೊದಲಿಗೆ ಸ್ತನ ಕ್ಯಾನ್ಸರ್ ಬಗ್ಗೆ ಪ್ರಮುಖ ಮೂರು ಸಂಗತಿಗಳನ್ನು ಗಮನಿಸೋಣ.
ಅ) 1985 ರಲ್ಲಿ ಭಾರತದಲ್ಲಿನ ಆಸ್ಟ್ರಾ ಜೆನಿಕಾ ಎಂಬ ಔಷಧಿ ಉತ್ಪಾದನಾ ಸಂಸ್ಥೆಯಿಂದ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಆರಂಭವಾಯಿತು. Arimidex ಹಾಗೂ Tamoxifen ಮುಂತಾದ ಔಷಧಿಗಳನ್ನು ಆಸ್ಟ್ರಾ ಜೆನಿಕಾ ಉತ್ಪಾದಿಸುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ mammography ಚಿಕಿತ್ಸಾ ವಿಧಾನಕ್ಕೆ ಹೆಚ್ಚಿನ ಪ್ರಚಾರ ನೀಡುವ ಉದ್ದೇಶವನ್ನು ಆಸ್ಟ್ರಾ ಜೆನಿಕಾ ಹೊಂದಿದೆ.
ಆ) 1993ರಲ್ಲಿ ಸ್ತನ ಕ್ಯಾನ್ಸರ್ ಸಂಶೋಧನಾ ಕೇಂದ್ರ ಆರಂಭಿಸಿದ ಎವೆಲಿನ್ ಲೌಡರ್, ಸಾಂಕೇತಿಕವಾಗಿ ಪಿಂಕ್ ರಿಬ್ಬನ್ ಅನ್ನು ಪರಿಚಯಿಸಿದರು. ಅಂದಿನಿಂದ 'ಪಿಂಕ್ ರಿಬ್ಬನ್' ಸ್ತನ ಕ್ಯಾನ್ಸರಿನ ಅಧಿಕೃತ ಚಿನ್ಹೆಯಾಗಿ ಜನಪ್ರಿಯಗೊಂಡಿತು.
ಇ) ಸ್ತನ ಕೋಶಗಳಿಗೆ ಕ್ಯಾನ್ಸರ್ ತಗುಲಲು ಡಿಎನ್ ಎಯಲ್ಲಿ ಬದಲಾವಣೆ ಕಾರಣ ಇರಬಹುದು ಎಂದು ಹಲವಾರು ವರ್ಷಗಳ ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ಕೆಲವಾರು ವಂಶವಾಹಿ(ಜೀನ್) ಗಳಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.
ಸ್ತನ ಕ್ಯಾನ್ಸರ್ ಯಾಕೆ ಬರುತ್ತದೆ? ಅದಕ್ಕೇನು ಕಾರಣ?
* ವಯಸ್ಸು: ವಯಸ್ಸು ಹೆಚ್ಚಾದಂತೆಲ್ಲ ಸೋಂಕು ತಗುಲುವ ಸಾಧ್ಯತೆ/ಅಪಾಯ ಹೆಚ್ಚು. 40 ರಿಂದ 60ರ ವಯೋಮಾನದ ಸುಮಾರು ಶೇ.16 ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತೊಂದರೆ ಇರುವುದು ಕಂಡು ಬಂದಿದೆ.
* ವಂಶಪರಂಪರೆ: ಈ ಮುಂಚೆ ನಿಮ್ಮ ಹಿಂದಿನ ತಲೆಮಾರಿನವರಿಗೆ ಅಂದರೆ ನಿಮ್ಮ ಅಜ್ಜಿ, ಅಮ್ಮ ಯಾರಿಗಾದರೂ ಈ ಕಾಯಿಲೆ ಬಂದಿದ್ದರೆ, ನಿಮಗೂ ಈ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ. BR CA1 ಎಂಬ ಜೀನ್ ಅನ್ನು ಗುರುತಿಸಲಾಗಿದ್ದು, ಈ ಜೀನ್ ನಿಮ್ಮಲ್ಲಿದ್ದರೆ, ಕಾಯಿಲೆ ಬರುವ ಸಂಭವ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
* ಹಾರ್ಮೋನ್ ಬದಲಾವಣೆ: ಹುಡುಗಿಯರು ಋತಿಮತಿಯಾದಾಗ ಹಾಗೂ ಗರ್ಭಿಣಿಯಾದಾಗ ಅವರ ದೇಹದಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳಾಗುತ್ತದೆ. 12 ವರ್ಷ ವಯೋಮಿತಿಯಲ್ಲಿ ಋತುಚಕ್ರಕ್ಕೆ ಕಾಲಿರಿಸಿದ ಹುಡುಗಿಯರಿಗೆ, 55 ವರ್ಷದ ನಂತರ ಮುಟ್ಟು ನಿಂತ ಮಹಿಳೆ ಹಾಗೂ ಇಳಿ ವಯಸ್ಸಿನಲ್ಲಿ ಗರ್ಭದಾರಣೆ ಮಾಡುವ ಸ್ತ್ರೀಯರಿಗೆ ಈ ಕಾಯಿಲೆಯ ಅಪಾಯ ಎದುರಾಗುವ ಸಂಭವವಿರುತ್ತದೆ.
* ಎದೆಹಾಲು: ಮಕ್ಕಳಿಗೆ ಎದೆಹಾಲು ನೀಡದಿರುವ ಮಹಿಳೆಯರಿಗೆ ಅಪಾಯ ಕಾದಿದೆ. ಈ ಬಗ್ಗೆ ಸಂಶೋಧಕರು ಖಚಿತವಾಗಿ ಸ್ಪಷ್ಟಪಡಿಸಿಲ್ಲವಾದರೂ ಮಗುನಿಗೆ ಮೊಲೆಯೂಡುವುದರಿಂದ ಕ್ಯಾನ್ಸರ್ ದೂರಾಗಿಸಬಹುದು ಎಂದು ಹೇಳಲಾಗುತ್ತದೆ.
ಇನ್ನು ಧೂಮಪಾನ, ಮದ್ಯ ಸೇವನೆ, ಮಾದಕ ದ್ರವ್ಯ ಚಟ ಮುಂತಾದವುಗಳಿಗೆ ದಾಸರಾದ ಮಹಿಳೆಯರಿಗೆ ಸಹಜವಾಗಿ ಕ್ಯಾನ್ಸರ್ ರೋಗ ಅಮರಿಕೊಳ್ಳುತ್ತದೆ. ಅತಿಯಾದರೆ ಎಲ್ಲವೂ ಅಪಾಯ ಎಂಬ ವೈದ್ಯರ ನೀತಿವಾಕ್ಯ ಸ್ತನ ಕ್ಯಾನ್ಸರಿಗೂ ಸಲ್ಲುತ್ತದೆ