Tuesday, March 8, 2011

ಹಲ್ಲುಗಳ ಆರೋಗ್ಯ ಕಾಪಾಡಲು ಆರು ಟಿಪ್ಸ್

ನೀವು ನಕ್ಕಾಗ ಹೊಳೆಯುವ ದಂತಪಂಕ್ತಿಗಳು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತವೆ. ಸುಂದರ ನಗುವಿಗೆ ಕಾರಣವಾಗುತ್ತದೆ. ಕ್ಷಮಿಸಿ, ಇದು ಯಾವುದೇ ಟೂಥ್ ಪೇಸ್ಟ್ ಜಾಹೀರಾತಲ್ಲ. ಮಾರುಕಟ್ಟೆಯಲ್ಲಿಂದು ಸಾವಿರಾರು ಕೃತಕ ಡೆಂಟಲ್ ಕೇರ್ ಉತ್ಪನ್ನಗಳು ಬರುತ್ತಿವೆ. ಆದರೆ ನಾವು ಹೇಳಹೊರಟದ್ದು ನೀವು ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಡೆಂಟಲ್ ಕೇರ್ ಬಗ್ಗೆ. ಹಲ್ಲು, ಒಸಡು, ಬಾಯಿಯ ಆರೈಕೆಗೆ ಇದಕ್ಕಿಂತ ಬೆಸ್ಟ್ ಉಪಾಯ ಯಾವುದಿದೆ?
ಚಂದದ ನಗುವಿಗೆ ಇಲ್ಲಿದೆ ಟಿಪ್ಸ್
1. ಲವಂಗ : ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು ಲವಂಗ ಬಳಸಿ. ಇದು ಆಂಟಿ-ಬ್ಯಾಕ್ಟಿರಿಯಾ ಗುಣಹೊಂದಿದ್ದು ಬಾಯಿಯ ಕೆಟ್ಟ ವಾಸನೆಯನ್ನೂ ಹೋಗಲಾಡಿಸುತ್ತದೆ. ಪ್ರತಿ ಬಾರಿ ಊಟ ಮಾಡಿದ ನಂತರ ಒಂದು ಲವಂಗವನ್ನು ಬಾಯಿಯೊಳಗೆ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಹಲ್ಲು ನೋವಿಗೆ ಲವಂಗದ ಎಣ್ಣೆ ಉತ್ತಮ ಔಷಧಿ.

2. ಟೂಥ್ ಪೇಸ್ಟ್ : ಮನೆಯಲ್ಲಿಯೇ ಟೂಥ್ ಪೇಸ್ಟ್ ತಯಾರಿಸಿ. ಹೇಗೆ ಮಾಡುವುದೆಂದು ಕೇಳುತ್ತಿದ್ದೀರಾ? ಅಡುಗೆ ಸೋಡಾ 6 ಚಮಚ, 1/3 ಚಮಚ ಉಪ್ಪು, 4 ಚಮಚ ಗ್ಲಿಸರಿನ್ ಮತ್ತು 15 ಹನಿ ಪೆಪ್ಪರ್ ಮಿಂಟ್ ಎಣ್ಣೆಯನ್ನು ಸರಿಯಾಗಿ ಪೇಸ್ಟ್ ಆಗುವರೆಗೆ ಮಿಕ್ಸ್ ಮಾಡಿಟ್ಟುಕೊಳ್ಳಿ. ಪೇಸ್ಟ್ ರೆಡಿ. ಇದನ್ನು ದಿನಾ ಬಳಸುತ್ತಿದ್ದರೆ ನಿಮಗೆ ಆಶ್ಚರ್ಯವಾಗುವಂತೆ ಹಲ್ಲು ಶುಭ್ರವಾಗುತ್ತದೆ. ಇದು ಬಾಯಿಯೊಳಗಿನ ಕ್ರಿಮಿಗಳನ್ನೂ ನಾಶಪಡಿಸುತ್ತದೆ. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದನ್ನು ಮಾತ್ರ ಮರೆಯಬೇಡಿ.

3. ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ : ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ.

4. ಬೇವಿನ ಕಡ್ಡಿ : ಬಾಯಿಯೊಳಗಿನ ಬ್ಯಾಕ್ಟಿರಿಯಾ ಹೋಗಲಾಡಿಸಲು ಬೇವಿನ ಕಡ್ಡಿಯಿಂದ ಹಲ್ಲುಜ್ಜಿ. ಬೇವಿನ ಕಡ್ಡಿ ಜಗಿಯುವುದರಿಂದ ಹಲ್ಲು ಸದೃಢವಾಗುತ್ತವೆ. ಇದರಿಂದ ಹಲ್ಲು ಹುಳುಕಾಗುವುದು ಕೂಡ ತಪ್ಪುತ್ತದೆ. ಆರಂಭದಲ್ಲಿ ಕಹಿಎನಿಸಬಹುದು. ಆದರೆ ರೂಢಿಯಾಗುವವರೆಗೆ, ಅಷ್ಟೆ.

5. ಮೂಲಂಗಿ ಎಲೆ : ಮೂಲಂಗಿ ಎಲೆ ಕೂಡ ಹಲ್ಲಿನ ಆರೋಗ್ಯಕ್ಕೆ ಸಹಕಾರಿ. ಮೂಲಂಗಿ ಎಲೆ ಜಗಿಯುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು ಹಲ್ಲಿಗೆ ಒಳ್ಳೆಯದು. ಮಾರುಕಟ್ಟೆಗೆ ಹೋದಾಗ ಮೂಲಂಗಿ ಜೊತೆಗಿರುವ ಎಲೆಯನ್ನು ಎಸೆಯಬೇಡಿ. ಎಲೆಯನ್ನು ಹಸಿ ಈರುಳ್ಳಿ ಜೊತೆ ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಪಚಡಿ ಮಾಡಿ ತಿನ್ನಬಹುದು. ಹೊಟ್ಟೆಗೂ ಇದು ಒಳ್ಳೆಯದು.

6. ಕ್ಯಾಲ್ಸಿಯಂ : ಕ್ಯಾಲ್ಸಿಯಂ ಜಾಸ್ತಿಯಿರುವ ಆಹಾರದಿಂದ ಹಲ್ಲು ಮತ್ತು ಒಸಡು ಹೆಚ್ಚು ಆರೋಗ್ಯಪೂರ್ಣವಾಗುತ್ತದೆ. ಅದಕ್ಕಾಗಿ ಕಾಳು, ಹಣ್ಣು ತರಕಾರಿಗಳು, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಳು ಇತ್ಯಾದಿ ಕ್ಯಾಲ್ಸಿಯಂ ಅತ್ಯಧಿಕವಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಈ ಆರು ಟಿಪ್ಸ್ ಮೂಲಕ ನೀವು ಮನೆಯಲ್ಲಿಯೇ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮಗೆ ನೀವೇ ಡೆಂಟಿಸ್ಟ್ ಆಗಿ. ಇನ್ನೊಂದು ಮಾತು ನೆನಪಿಡಿ. ಆರೋಗ್ಯಕರ ಹಲ್ಲುಗಳು ಹೃದಯಬೇನೆ ಮುಂತಾದ ಅನಾರೋಗ್ಯದಿಂದಲೂ ಕಾಪಾಡುತ್ತವೆ

ಬೇಸಿಗೆಯಲ್ಲಿ ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆ

ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಲಭ್ಯವಿರುವ ತರಕಾರಿ, ಹಣ್ಣುಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಸೈಡ್ ಎಫೆಕ್ಟ್ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು.

ದಿನ ನಿತ್ಯ ಬಳಸುವ ತರಕಾರಿ ಹಾಗೂ ಹಣ್ಣುಗಳಾದ ಸೌತೆಕಾಯಿ, ಸೇಬು ಹಣ್ಣು, ಎಲೆಕೋಸು, ಕಿತ್ತಲೆ, ತೆಂಗಿನಕಾಯಿ, ಟೊಮಾಟೋ, ಕಲ್ಲಂಗಡಿ ಹಣ್ಣು, ಕ್ಯಾರೆಟ್, ಆಲೂಗೆಡ್ಡೆ, ದ್ರಾಕ್ಷಿ, ಪಪ್ಪಾಯ ಮುಂತಾದವುಗಳು ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆಯ ಸಾಧನಗಳಾಗಿ ಪರಿವರ್ತನೆಗೊಳಿಸಿ ಬಳಸಬಹುದು.

ಸೌತೆಕಾಯಿ ರಸ: ಚಿಕ್ಕ ಎಳೆ ಸೌತೆಕಾಯಿ ತೆಗೆದುಕೊಂಡು ಸಿಪ್ಪೆ ತೆಗೆದು, ಚೆನ್ನಾಗಿ ಹಿಚುಕಿ ರಸ ತೆಗೆಯಿರಿ. 1/4 ಭಾಗ ರೋಸ್ ವಾಟರ್ ಹಾಗೂ ನಿಂಬೆ ರಸ ಬೆರೆಸಿ. ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಿ. ಇದರಿಂದ ಮಂಕಾದ, ಜಿಡ್ಡು ಜಿಡ್ಡಾದ ಮುಖವು ಹೊಸ ಕಾಂತಿ ಪಡೆಯುತ್ತದೆ.
ಫೇಸ್ ಪ್ಯಾಕ್ ಶುದ್ಧೀಕರಣ: 1/4 ಟೀ ಚಮಚ ನಿಂಬೆ ರಸವನ್ನು 1 ಟೀ ಚಮಚ ಹಾಲು ಹಾಗೂ ಸೌತೆ ರಸದೊಂದಿಗೆ ಸಮವಾಗಿ ಬೆರೆಸಿ ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳಿ. ಸುಮಾರು 14 ನಿಮಿಷದ ನಂತರ ಮುಖ ಮಾರ್ಜನ ಮಾಡಬಹುದು.
ಎಲೆಕೋಸು ಮಾಸ್ಕ್: ಎಲೆಕೋಸಿನ ಕೆಲವು ಎಲೆಗಳನ್ನು ಅರೆದು ರಸ ತೆಗೆದುಕೊಳ್ಳಿ. ಅದಕ್ಕೆ 1/4 ಚಮಚ ಈಸ್ಟ್ ಬೆರೆಸಿ, 1 ಟೀ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿರಿ. ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಲೇಪಿಸಿರಿ. 15 ನಿಮಿಷದ ನಂತರ ನೀರಿನಲ್ಲಿ ಹತ್ತಿಯನ್ನು ಅದ್ದಿಕೊಂಡು ಮಾಸ್ಕ್ ಅನ್ನು ನಿಧಾನವಾಗಿ ಒರೆಸಿಕೊಳ್ಳಿ. ಈ ಕ್ರಮದಿಂದ ಮುಖದ ಸುಕ್ಕು, ಒಣ ತ್ವಚೆ ದೂರವಾಗಿ ಹೂವಿನಂತೆ ಅರಳುವುದು.
ಕಿತ್ತಲೆ ರಸ ಪ್ರಯೋಗ: ಕೆಲ ಬಾದಾಮಿಗಳನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಅದಕ್ಕೆ 2 ಟೀ ಚಮಚ ಹಾಲು ಮತ್ತು 1 ಟೀ ಚಮಚ ಕ್ಯಾರೆಟ್ ಹಾಗೂ ಕಿತ್ತಲೆ ರಸ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ನಂತರ ಮುಖಕ್ಕೆ ಲೇಪಿಸಿಕೊಂಡು ಸುಮಾರು ಅರ್ಧ ಗಂಟೆ ಕಾಲ ವಿಶ್ರಮಿಸಿ. ಇದರಿಂದ ಮುಖದಲ್ಲಿರುವ ಕಲೆಗಳು ದೂರವಾಗಿ, ತ್ವಚೆ ಮೃದುವಾಗಿ ಗೋಚರಿಸುತ್ತದೆ.
ಟೊಮಾಟೋ ಲೋಷನ್: 1 ಟೀ ಚಮಚ ಟೊಮಾಟೋ ರಸಕ್ಕೆ ಕೆಲ ಹನಿ ನಿಂಬೆ ರಸ ಬೆರೆಸಿ, 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿ ಉಂಟಾದ ಸೂಕ್ಷ್ಮರಂಧ್ರಗಳು ಕೂಡಾ ಮುಚ್ಚಲ್ಪಡುತ್ತವೆ. ಮೃದುವಾದ ಆಲೂಗೆಡ್ಡೆ ತುಂಡುಗಳನ್ನು ಹೆಚ್ಚಿಕೊಂಡಿ ನೇರವಾಗಿ ಮುಖಕ್ಕೆ ಬಳಿದುಕೊಳ್ಳಬಹುದು. ಅಥವಾ ಆಲೂಗೆಡ್ಡೆ ರಸವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ದಿನವಿಡೀ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಬಹುದು.
ಕಲ್ಲಂಗಡಿ ಹಣ್ಣು : ಸಣ್ಣ ಕಲ್ಲಂಗಡಿ ಹಣ್ಣು ತೆಗೆದುಕೊಂಡು, ಬೀಜಗಳನ್ನು ಎಸೆದು ರಸ ತೆಗೆದುಕೊಳ್ಳಿ. ಕುತ್ತಿಗೆ ಹಾಗೂ ಮುಖದ ಚರ್ಮಕ್ಕೆ 15 ನಿಮಿಷ ಲೇಪಿಸಿ, ನಂತರ ಮುಖ ತೊಳೆದುಕೊಳ್ಳಿ. ಈ ಲೋಷನ್ ನಿಂದ ಮುಖದ ಕಾಂತಿ ಹೆಚ್ಚುತ್ತದೆ.
ಕ್ಯಾರೆಟ್ ಲೋಷನ್ : 1/4 ಟೀ ಚಮಚ ಕ್ಯಾರೆಟ್ ರಸಕ್ಕೆ 1 ಟೀ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಸೋಡಾ ಬೈಕಾರ್ಬೊನೇಟ್ ಬೆರೆಸಿದ ನೀರಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿಕೊಳ್ಳಿ. ಇದರಿಂದ ತ್ವಚೆ ಮೃದುವಾಗಿ ನಳನಳಿಸುತ್ತದೆ.
ಟೊಮಾಟೋ ರಸ : 2 ಟೀ ಚಮಚ ಟೊಮಾಟೊ ರಸಕ್ಕೆ 4 ಟೇಬಲ್ ಚಮಚ ಮಜ್ಜಿಗೆ ಬೆರೆಸಿ ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ಕಾಲ ವಿರಾಮಿಸಿ. ಇದು ಸನ್ ಬರ್ನ್ ನಿಂದ ಉಂಟಾಗುವ ಕಿರಿಕಿರಿಯನು ತಪ್ಪಿಸುತ್ತದೆ.
ಸೇಬು ಹಣ್ಣು ಟಾನಿಕ್: 1 ಟೇಬಲ್ ಚಮಚ ಸೇಬು ಹಣ್ಣಿನ ರಸಕ್ಕೆ 1/4 ಟೀ ಚಮಚ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡು ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮುಖ ಹೊಳೆಯುತ್ತದೆ.
ಇದೇ ಕ್ರಮದಲ್ಲಿ ದ್ರಾಕ್ಷಿ ರಸವನ್ನು 15 ನಿಮಿಷಗಳ ಕಾಲ ಹಚ್ಚಿಕೊಳ್ಳುವುದರಿಂದ ತ್ವಚೆ ಮೃದುವಾಗುತ್ತದೆ. 1 ಟೇಬಲ್ ಚಮಚ ಪಪ್ಪಾಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ದೂರಾಗುತ್ತವೆ. ತೆಂಗಿನ ಕಾಯಿ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇನ್ನೂ ಅನೇಕ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಸ್ತನ ಕ್ಯಾನ್ಸರ್ ಬಗ್ಗೆ ಸ್ತೀಯರಿಗೆ ಕಿವಿಮಾತು
ಸ್ತನ ಕ್ಯಾನ್ಸರ್ ! ಪ್ರತಿಯೊಬ್ಬ ಮಹಿಳೆಯನ್ನೂ ಬೆಚ್ಚಿ ಬೀಳಿಸುವ ಶಬ್ದ. ವಯಸ್ಸೋ, ವಂಶವಾಹಿನಿಯೋ, ಹಾರ್ಮೋನ್ ಬದಲಾವಣೆಗಳೋ, ಯಾವುದೋ ಒಂದು ಕಾರಣದಿಂದ ಎದೆಗಪ್ಪಳಿಸುವ ಈ ಕಾಯಿಲೆ ಬಗ್ಗೆ ಅನೇಕರಿಗೆ ಭಯ ಹೆಚ್ಚು ಆದರೆ, ತಿಳವಳಿಕೆ ಕಡಿಮೆ. ಸ್ತನಗಳ ಆರೋಗ್ಯ, ಮುಖ್ಯವಾಗಿ ಇಡೀ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಎಷ್ಟು ಮುನ್ನೆಚ್ಚರಿಕೆವಹಿಸಿದರೂ ಕಡಿಮೆಯೇ. ಪ್ರತಿಯೊಬ್ಬ ಮಹಿಳೆಯೂ ಈ ಕಾಯಿಲೆ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಕ್ಯಾನ್ಸರ್ ಹತ್ತಿರ ಸುಳಿಯದಂತೆ ಕಾಳಜಿವಹಿಸಬೇಕೆನ್ನುವ ಕಳಕಳಿ ದಟ್ಸ್ ಕನ್ನಡದ್ದು.

ಈ ಕ್ಯಾನ್ಸರಿನ ಬಹುತೇಕ ಪ್ರಕರಣಗಳಲ್ಲಿ ಮುನ್ನೆಚ್ಚರಿಕೆಗಿಂತ ಕಾಯಿಲೆ ಉಲ್ಬಣವಾದ ನಂತರವಷ್ಟೇ ಮಹಿಳೆಯರು ಚಿಕಿತ್ಸೆಯನ್ನು ಅರಸಿಕೊಂಡು ಹೋಗುವುದು ವ್ಯಕ್ತವಾಗಿರುವ ಅಂಶ. ಕಾಯಿಲೆ ಬಗ್ಗೆ ಬಹಳಷ್ಟು ಜನರಿಗೆ ಅರಿವು , ಮಾಹಿತಿ ಇಲ್ಲದಿರುವುದೇ ಉಲ್ಬಣಗೊಳ್ಳುವುದಕ್ಕೆ ಕಾರಣ. ಇಂಥ ಮಾನಿನಿಯರಿಗೆ ಮಾಹಿತಿ ಒದಗಿಸುವ ಮತ್ತು ತನ್ಮೂಲಕ ಜಾಗೃತಿ ಉಂಟುಮಾಡುವದಕ್ಕಾಗಿ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಎಂದು ಕರೆಯಲಾಗುತ್ತದೆ. ಇವತ್ತಿನಿಂದಲೇ ಆರಂಭಗೊಳ್ಳುವ ಜಾಗೃತಿ ಸದಾ ನಿಮ್ಮ ಸಂಗಾತಿಯಾಗಿರಲಿ ಎಂಬ ಆಶಯ ನಮ್ಮದು.
ಮೊದಲಿಗೆ ಸ್ತನ ಕ್ಯಾನ್ಸರ್ ಬಗ್ಗೆ ಪ್ರಮುಖ ಮೂರು ಸಂಗತಿಗಳನ್ನು ಗಮನಿಸೋಣ.
ಅ) 1985 ರಲ್ಲಿ ಭಾರತದಲ್ಲಿನ ಆಸ್ಟ್ರಾ ಜೆನಿಕಾ ಎಂಬ ಔಷಧಿ ಉತ್ಪಾದನಾ ಸಂಸ್ಥೆಯಿಂದ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಆರಂಭವಾಯಿತು. Arimidex ಹಾಗೂ Tamoxifen ಮುಂತಾದ ಔಷಧಿಗಳನ್ನು ಆಸ್ಟ್ರಾ ಜೆನಿಕಾ ಉತ್ಪಾದಿಸುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ mammography ಚಿಕಿತ್ಸಾ ವಿಧಾನಕ್ಕೆ ಹೆಚ್ಚಿನ ಪ್ರಚಾರ ನೀಡುವ ಉದ್ದೇಶವನ್ನು ಆಸ್ಟ್ರಾ ಜೆನಿಕಾ ಹೊಂದಿದೆ.
ಆ) 1993ರಲ್ಲಿ ಸ್ತನ ಕ್ಯಾನ್ಸರ್ ಸಂಶೋಧನಾ ಕೇಂದ್ರ ಆರಂಭಿಸಿದ ಎವೆಲಿನ್ ಲೌಡರ್, ಸಾಂಕೇತಿಕವಾಗಿ ಪಿಂಕ್ ರಿಬ್ಬನ್ ಅನ್ನು ಪರಿಚಯಿಸಿದರು. ಅಂದಿನಿಂದ 'ಪಿಂಕ್ ರಿಬ್ಬನ್' ಸ್ತನ ಕ್ಯಾನ್ಸರಿನ ಅಧಿಕೃತ ಚಿನ್ಹೆಯಾಗಿ ಜನಪ್ರಿಯಗೊಂಡಿತು.
ಇ) ಸ್ತನ ಕೋಶಗಳಿಗೆ ಕ್ಯಾನ್ಸರ್ ತಗುಲಲು ಡಿಎನ್ ಎಯಲ್ಲಿ ಬದಲಾವಣೆ ಕಾರಣ ಇರಬಹುದು ಎಂದು ಹಲವಾರು ವರ್ಷಗಳ ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ಕೆಲವಾರು ವಂಶವಾಹಿ(ಜೀನ್) ಗಳಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.
ಸ್ತನ ಕ್ಯಾನ್ಸರ್ ಯಾಕೆ ಬರುತ್ತದೆ? ಅದಕ್ಕೇನು ಕಾರಣ?
* ವಯಸ್ಸು: ವಯಸ್ಸು ಹೆಚ್ಚಾದಂತೆಲ್ಲ ಸೋಂಕು ತಗುಲುವ ಸಾಧ್ಯತೆ/ಅಪಾಯ ಹೆಚ್ಚು. 40 ರಿಂದ 60ರ ವಯೋಮಾನದ ಸುಮಾರು ಶೇ.16 ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತೊಂದರೆ ಇರುವುದು ಕಂಡು ಬಂದಿದೆ.
* ವಂಶಪರಂಪರೆ: ಈ ಮುಂಚೆ ನಿಮ್ಮ ಹಿಂದಿನ ತಲೆಮಾರಿನವರಿಗೆ ಅಂದರೆ ನಿಮ್ಮ ಅಜ್ಜಿ, ಅಮ್ಮ ಯಾರಿಗಾದರೂ ಈ ಕಾಯಿಲೆ ಬಂದಿದ್ದರೆ, ನಿಮಗೂ ಈ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ. BR CA1 ಎಂಬ ಜೀನ್ ಅನ್ನು ಗುರುತಿಸಲಾಗಿದ್ದು, ಈ ಜೀನ್ ನಿಮ್ಮಲ್ಲಿದ್ದರೆ, ಕಾಯಿಲೆ ಬರುವ ಸಂಭವ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
* ಹಾರ್ಮೋನ್ ಬದಲಾವಣೆ: ಹುಡುಗಿಯರು ಋತಿಮತಿಯಾದಾಗ ಹಾಗೂ ಗರ್ಭಿಣಿಯಾದಾಗ ಅವರ ದೇಹದಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳಾಗುತ್ತದೆ. 12 ವರ್ಷ ವಯೋಮಿತಿಯಲ್ಲಿ ಋತುಚಕ್ರಕ್ಕೆ ಕಾಲಿರಿಸಿದ ಹುಡುಗಿಯರಿಗೆ, 55 ವರ್ಷದ ನಂತರ ಮುಟ್ಟು ನಿಂತ ಮಹಿಳೆ ಹಾಗೂ ಇಳಿ ವಯಸ್ಸಿನಲ್ಲಿ ಗರ್ಭದಾರಣೆ ಮಾಡುವ ಸ್ತ್ರೀಯರಿಗೆ ಈ ಕಾಯಿಲೆಯ ಅಪಾಯ ಎದುರಾಗುವ ಸಂಭವವಿರುತ್ತದೆ.
* ಎದೆಹಾಲು: ಮಕ್ಕಳಿಗೆ ಎದೆಹಾಲು ನೀಡದಿರುವ ಮಹಿಳೆಯರಿಗೆ ಅಪಾಯ ಕಾದಿದೆ. ಈ ಬಗ್ಗೆ ಸಂಶೋಧಕರು ಖಚಿತವಾಗಿ ಸ್ಪಷ್ಟಪಡಿಸಿಲ್ಲವಾದರೂ ಮಗುನಿಗೆ ಮೊಲೆಯೂಡುವುದರಿಂದ ಕ್ಯಾನ್ಸರ್ ದೂರಾಗಿಸಬಹುದು ಎಂದು ಹೇಳಲಾಗುತ್ತದೆ.
ಇನ್ನು ಧೂಮಪಾನ, ಮದ್ಯ ಸೇವನೆ, ಮಾದಕ ದ್ರವ್ಯ ಚಟ ಮುಂತಾದವುಗಳಿಗೆ ದಾಸರಾದ ಮಹಿಳೆಯರಿಗೆ ಸಹಜವಾಗಿ ಕ್ಯಾನ್ಸರ್ ರೋಗ ಅಮರಿಕೊಳ್ಳುತ್ತದೆ. ಅತಿಯಾದರೆ ಎಲ್ಲವೂ ಅಪಾಯ ಎಂಬ ವೈದ್ಯರ ನೀತಿವಾಕ್ಯ ಸ್ತನ ಕ್ಯಾನ್ಸರಿಗೂ ಸಲ್ಲುತ್ತದೆ